ಇಸ್ರೇಲರಿಗೆ ಮೋಶೆಯು ಈ ಆಜ್ಞೆಗಳನ್ನು ಕೊಟ್ಟನು. ಆಗ ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ಅಡವಿಯಲ್ಲಿ ಪಾಳೆಯ ಮಾಡಿಕೊಂಡಿದ್ದರು. ಇದು ಸೂಫಿಗೆ ಎದುರಾಗಿ, ಪಾರಾನಿನ ಮರುಭೂಮಿಗೂ ತೋಫೆಲ್, ಲಾಬಾನ್, ಹಚೇರೋತ್ ಮತ್ತು ದೀಜಾಹಾಬ್ ಪಟ್ಟಣಗಳ ನಡುವೆ ಇತ್ತು.
ಆದರೆ ಇಸ್ರೇಲರು ಈಜಿಪ್ಟನ್ನು ಬಿಟ್ಟು ಈ ಸ್ಥಳಕ್ಕೆ ಬರಲು ನಲವತ್ತು ವರ್ಷಗಳು ಹಿಡಿದವು. ನಲವತ್ತನೆ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಮೋಶೆಯು ಜನರೊಂದಿಗೆ ಮಾತಾಡಿ ಯೆಹೋವನು ಆಜ್ಞಾಪಿಸಿದ ಸಮಸ್ತ ವಿಷಯಗಳನ್ನು ತಿಳಿಸಿದನು.
ಸೀಹೋನನನ್ನು ಮತ್ತು ಓಗನನ್ನು ದೇವರಾದ ಯೆಹೋವನು ಸೋಲಿಸಿದ ಬಳಿಕ ನಡೆದ ಸಂಗತಿಯಿದು. (ಸೀಹೋನನು ಅಮೋರಿಯರ ರಾಜನಾಗಿದ್ದನು. ಅವನು ಹೆಷ್ಬೋನಿನಲ್ಲಿ ವಾಸಿಸುತ್ತಿದ್ದನು. ಓಗನು ಬಾಷಾನಿನ ಅರಸನು. ಇವನು ಅಷ್ಟಾರೋತ್ ಮತ್ತು ಎದ್ರೈ ಎಂಬಲ್ಲಿ ವಾಸವಾಗಿದ್ದನು.)
ಅಮೋರಿಯರು ವಾಸಿಸುವ ಬೆಟ್ಟಪ್ರಾಂತ್ಯಗಳಿಗೆ ಹೋಗಿರಿ, ಅದರ ಸುತ್ತಲೂ ಇರುವ ಜೋರ್ಡನಿನ ಬಯಲು ಪ್ರದೇಶಕ್ಕೆ, ಬೆಟ್ಟಪ್ರದೇಶಕ್ಕೆ, ಪಶ್ಚಿಮದ ಇಳಕಲುಪ್ರದೇಶಕ್ಕೆ, ನೆಗೆವ್ ಮತ್ತು ಸಮುದ್ರ ಕರಾವಳಿ ಪ್ರದೇಶಗಳಿಗೆ ಹೋಗಿರಿ. ಕಾನಾನ್ ಮತ್ತು ಲೆಬನೋನ್ ಪ್ರದೇಶಗಳ ಮೂಲಕ ಯೂಫ್ರೇಟೀಸ್ ಮಹಾನದಿಯವರೆಗೂ ಹೋಗಿರಿ.
ನಾನು ನಿಮಗೆ ಆ ಪ್ರಾಂತ್ಯವನ್ನೆಲ್ಲಾ ಕೊಡುವೆನು. ಅಲ್ಲಿಗೆ ಹೋಗಿ ಅದನ್ನು ತೆಗೆದುಕೊಳ್ಳಿರಿ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮತ್ತು ಅವರ ಸಂತತಿಯವರಿಗೆ ಆ ಪ್ರದೇಶವನ್ನು ಕೊಡುವೆನು ಎಂದು ನಾನು ವಾಗ್ದಾನ ಮಾಡಿದ್ದೇನೆ.’ ”
ಆಗ ನಾನು ನಿಮಗೆ ಹೇಳಿದ್ದೇನೆಂದರೆ: ‘ನಿಮ್ಮನಿಮ್ಮ ಕುಲಗಳಿಂದ ಯೋಗ್ಯರಾದವರನ್ನು ಆರಿಸಿರಿ. ಅವರನ್ನು ನಿಮ್ಮ ನಾಯಕರನ್ನಾಗಿ ನೇಮಿಸುವೆನು. ಅವರು ವಿವೇಕಿಗಳಾಗಿಯೂ ಅನುಭವಶಾಲಿಗಳಾಗಿಯೂ ಇರಬೇಕು’ ಎಂದು ಹೇಳಿದೆನು.
“ಆದ್ದರಿಂದ, ನಿಮ್ಮ ಕುಲಗಳಿಂದ ನೀವು ಆರಿಸಿಕೊಂಡ ಬುದ್ಧಿವಂತರಾದ ಮತ್ತು ಅನುಭವಸ್ಥರಾದ ಜನರನ್ನು ನಾನು ನೇಮಿಸಿದೆನು. ಈ ರೀತಿಯಾಗಿ ಅವರನ್ನು ಸಾವಿರ ಜನರ ಮೇಲೆಯೂ, ನೂರು ಜನರ ಮೇಲೆಯೂ, ಐವತ್ತು ಜನರ ಮೇಲೆಯೂ ಮತ್ತು ಹತ್ತು ಜನರ ಮೇಲೆಯೂ ನಾಯಕರನ್ನಾಗಿ ನೇಮಿಸಿದೆನು. ಅಲ್ಲದೆ ನಿಮ್ಮನಿಮ್ಮ ಕುಲಗಳಿಗೆ ಪ್ರಧಾನರನ್ನೂ ನೇಮಿಸಿದೆನು.
“ನಿಮ್ಮ ನ್ಯಾಯಗಳನ್ನು ತೀರಿಸುವ, ಆ ನಾಯಕರುಗಳಿಗೆ ಹೇಳಿದ್ದೇನೆಂದರೆ: ‘ನಿಮ್ಮ ಅಧೀನದಲ್ಲಿರುವ ಜನರ ದೂರುಗಳನ್ನು ಚೆನ್ನಾಗಿ ಕೇಳಿಕೊಂಡು ಪಕ್ಷಪಾತವಿಲ್ಲದೆ ನ್ಯಾಯತೀರಿಸಬೇಕು. ಅವರಿಬ್ಬರೂ ಇಸ್ರೇಲರೇ ಆಗಿರಬಹುದು ಅಥವಾ ಒಬ್ಬನು ಇಸ್ರೇಲನೂ ಮತ್ತೊಬ್ಬನು ಪರದೇಶಿಯೂ ಆಗಿರಬಹುದು. ನೀವು ಪ್ರತಿಯೊಂದು ದೂರನ್ನು ನ್ಯಾಯವಾಗಿ ಬಗೆಹರಿಸಿ ತೀರ್ಪು ನೀಡಬೇಕು.
ನ್ಯಾಯತೀರಿಸುವಾಗ ಒಬ್ಬನು ಇನ್ನೊಬ್ಬನಿಗಿಂತ ವಿಶೇಷ ವ್ಯಕ್ತಿಯಾಗಿದ್ದಾನೆ ಎಂಬುದನ್ನು ಲೆಕ್ಕಿಸದೆ ಇಬ್ಬರೂ ಸಮಾನರೆಂದು ಪರಿಗಣಿಸಿ ಸರಿಯಾದ ತೀರ್ಪು ಕೊಡಬೇಕು. ನೀವು ಯಾರಿಗೂ ಭಯಪಡಬೇಡಿರಿ. ಯಾಕೆಂದರೆ ನಿಮ್ಮ ತೀರ್ಪು ದೇವರಿಂದ ಬಂದ ತೀರ್ಪಾಗಿರುತ್ತದೆ. ನಿಮಗೆ ಬಗೆಹರಿಸಲು ಕಷ್ಟವಾಗುವ ದೂರುಗಳಿದ್ದಲ್ಲಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. ಅವುಗಳಿಗೆ ನಾನು ನ್ಯಾಯತೀರ್ಪು ನೀಡುವೆನು.’
“ಬಳಿಕ ನಾವು ನಮ್ಮ ದೇವರಾದ ಯೆಹೋವನ ಆಜ್ಞಾನುಸಾರವಾಗಿ ಹೋರೇಬ್ ಬೆಟ್ಟಪ್ರದೇಶವನ್ನು ಬಿಟ್ಟು ಅಮೋರಿಯರ ಗುಡ್ಡಗಾಡು ಪ್ರದೇಶದಲ್ಲಿ ಪ್ರಯಾಣಮಾಡುತ್ತಾ ನೀವು ನೋಡಿದ ಅತ್ಯಂತ ಭಯಂಕರವಾದ ಮತ್ತು ವಿಶಾಲವಾದ ಮರುಭೂಮಿಯನ್ನು ದಾಟಿ ಕಾದೇಶ್‌ಬರ್ನೇಯಕ್ಕೆ ಬಂದೆವು.
“ಆದರೆ ನೀವೆಲ್ಲಾ ನನ್ನ ಬಳಿಗೆ ಬಂದು, ‘ಆ ದೇಶವನ್ನು ಸಂಚರಿಸಿ ಅದರ ಬಲವುಳ್ಳ ಮತ್ತು ಬಲಹೀನ ಸ್ಥಳಗಳನ್ನು ನೋಡಿಕೊಂಡು ನಾವು ಯಾವ ಮಾರ್ಗವಾಗಿ ಹೋಗಬೇಕು ಮತ್ತು ಯಾವಯಾವ ಪಟ್ಟಣಗಳನ್ನು ದಾಟಬೇಕು ಎಂಬುದನ್ನು ನಮಗೆ ತಿಳಿಸಲು ನಮ್ಮಲ್ಲಿ ಕೆಲವರನ್ನು ಕಳುಹಿಸಿ’ ಎಂದು ಹೇಳಿದಿರಿ.
ನಿಮ್ಮನಿಮ್ಮ ಗುಡಾರಗಳಲ್ಲಿ ಯೆಹೋವನ ವಿರುದ್ಧವಾಗಿ ಗುಣುಗುಟ್ಟಿದಿರಿ, ‘ನಮ್ಮ ಯೆಹೋವನು ನಮ್ಮನ್ನು ದ್ವೇಷಿಸುತ್ತಾನೆ! ನಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ಅಮೋರಿಯರಿಂದ ನಾಶಪಡಿಸುತ್ತಿದ್ದಾನೆ!
ನಾವೀಗ ಎಲ್ಲಿಗೆ ಹೋಗೋಣ? ನಮ್ಮ ಸಹೋದರರು ತಮ್ಮ ವರದಿಯಿಂದ ನಮ್ಮನ್ನು ಹೆದರಿಸಿದ್ದಾರೆ. ಅಲ್ಲಿಯ ಜನರು ದೃಢಕಾಯರೂ ಬಲಶಾಲಿಗಳೂ ಎತ್ತರವಾದ ಪುರುಷರೂ ಆಗಿದ್ದಾರೆ. ಅವರ ಪಟ್ಟಣಗಳು ದೊಡ್ಡವುಗಳಾಗಿದ್ದು ಅವುಗಳ ಗೋಡೆಗಳು ಆಕಾಶಕ್ಕೆ ಮುಟ್ಟುವಷ್ಟು ಎತ್ತರವಾಗಿವೆ. ನಾವು ಅಲ್ಲಿ ಅನಾಕ್ಯರೆಂಬ ಮಹಾಶರೀರಗಳನ್ನು ನೋಡಿದೆವು!’ ಎಂದು ಅವರು ಹೇಳಿದಾಗ ನಾವು ಭಯದಿಂದ ತತ್ತರಿಸಿದೆವು.
ಅಡವಿಗಳಲ್ಲಿಯೂ ಮರುಭೂಮಿಗಳಲ್ಲಿಯೂ ಮನುಷ್ಯನು ತನ್ನ ಮಗುವನ್ನು ಹೊತ್ತುಕೊಂಡು ತರುವಂತೆ ದೇವರಾದ ಯೆಹೋವನು ನಿಮ್ಮನ್ನು ಹೊತ್ತುಕೊಂಡು ತಂದಿದ್ದಾನೆ. ಈ ಸ್ಥಳಕ್ಕೆ ಸುರಕ್ಷಿತವಾಗಿ ನಿಮ್ಮನ್ನು ತಂದು ಮುಟ್ಟಿಸಿದ್ದಾನೆ’ ಎಂದು ಹೇಳಿದೆನು.
ನೀವು ಪ್ರಯಾಣ ಮಾಡುತ್ತಿರುವಾಗ ಆತನು ನಿಮ್ಮ ಮುಂದೆ ಹೋದನು. ತಂಗಲು ಯೋಗ್ಯವಾದ ಸ್ಥಳದಲ್ಲಿ ನೀವು ಪಾಳೆಯ ಮಾಡಿಕೊಳ್ಳುವಂತೆ ಮಾಡಿದನು. ಹಗಲಲ್ಲಿ ಮೇಘಸ್ತಂಭವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭವಾಗಿಯೂ ಆತನು ನಿಮಗೆ ಮಾರ್ಗದರ್ಶಕನಾಗಿದ್ದನು.
ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಆ ದೇಶವನ್ನು ನೋಡುವನು. ಕಾಲೇಬನು ಸಂಚರಿಸಿದ ನಾಡನ್ನು ಅವನಿಗೂ ಅವನ ಸಂತತಿಯವರಿಗೂ ಕೊಡುವೆನು. ಯಾಕೆಂದರೆ ನಾನು ಆಜ್ಞಾಪಿಸಿದ್ದನ್ನೆಲ್ಲ ಕಾಲೇಬನು ಮಾಡಿದನು’ ಎಂದು ಪ್ರಮಾಣಮಾಡಿದನು.
ಆದರೆ ನಿನ್ನ ಸಹಾಯಕನಾದ ನೂನನ ಮಗನಾದ ಯೆಹೋಶುವನು ಆ ದೇಶವನ್ನು ಪ್ರವೇಶಿಸುವನು. ಯೆಹೋಶುವನನ್ನು ಪ್ರೋತ್ಸಾಹಿಸು; ಯಾಕೆಂದರೆ ಆ ದೇಶವನ್ನು ವಶಪಡಿಸಿಕೊಳ್ಳಲು ಅವನು ಇಸ್ರೇಲರನ್ನು ಮುನ್ನಡೆಸಬೇಕು’ ಎಂದು ಹೇಳಿದನು.
ದೇವರಾದ ಯೆಹೋವನು ನಮಗೆ ಹೇಳಿದ್ದೇನೆಂದರೆ: ‘ವೈರಿಗಳ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕಮಕ್ಕಳಿಗೂ ಒಳ್ಳೆಯದು ಮತ್ತು ಕೆಟ್ಟದ್ದು ಅರಿಯದ ನಿಮ್ಮ ಮಕ್ಕಳಿಗೂ ಆ ದೇಶವನ್ನು ಕೊಡುವೆನು; ಅವರು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವರು.
“ಆಗ ನೀವು ಹೀಗೆ ಹೇಳಿದಿರಿ: ‘ಮೋಶೆಯೇ, ನಾವು ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದೆವು. ದೇವರಾದ ಯೆಹೋವನು ನಮಗೆ ಆಜ್ಞೆಮಾಡಿದ ಪ್ರಕಾರ ನಾವು ಈಗ ಹೋಗಿ ಅವರೊಂದಿಗೆ ಯುದ್ಧಮಾಡುತ್ತೇವೆ.’ “ಆಮೇಲೆ ನೀವು ಪ್ರತಿಯೊಬ್ಬರೂ ಆಯುಧಗಳನ್ನು ಧರಿಸಿಕೊಂಡಿರಿ. ಬೆಟ್ಟಪ್ರದೇಶಗಳನ್ನು ಜಯಿಸುವುದು ಸುಲಭವೆಂದು ನೀವು ಭಾವಿಸಿದ್ದಿರಿ.
ಆದರೆ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಆ ಜನರಿಗೆ ಬೆಟ್ಟವನ್ನೇರಿ ಯುದ್ಧಮಾಡಬಾರದೆಂದು ಹೇಳು. ಯಾಕೆಂದರೆ ನಾನು ಅವರೊಂದಿಗಿರುವುದಿಲ್ಲ ಮತ್ತು ಅವರ ವೈರಿಗಳು ಅವರನ್ನು ಸೋಲಿಸಿಬಿಡುವರು!’
“ನಾನು ನಿಮ್ಮೊಂದಿಗೆ ಮಾತನಾಡಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ. ನೀವು ಯೆಹೋವನ ಆಜ್ಞೆಗೆ ವಿಧೇಯರಾಗಲು ಒಪ್ಪಲಿಲ್ಲ. ನೀವು ನಿಮ್ಮ ಸ್ವಂತ ಶಕ್ತಿಯಿಂದ ಜಯ ಹೊಂದುವುದಾಗಿ ಭಾವಿಸಿ ಬೆಟ್ಟಪ್ರದೇಶವನ್ನು ಏರಿದಿರಿ.